ನುಡಿಗಟ್ಟು
ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಹಿಂದೆ ತಾವು ಹೇಳಿರದ, ಇನ್ನೊಬ್ಬ ಹೇಳಿದುದನ್ನು ಕೇಳಿರದ ಎಷ್ಟೋ ಹೊಸ ಮಾತುಗಳನ್ನು ಪ್ರಯೋಗಿಸಲು ಶಕ್ತರು. ಆದರೂ, ಆ ಮಾತುಗಳು ಕೇಳುವವನಿಗೆ ಅರ್ಥವಾಗುತ್ತದೆ. ಆ ಮಾತಿನ ಸಂದರ್ಭ ಮತ್ತು ಆ ಭಾಷೆಯ ಮೂಲಭೂತವಾದ ಕೆಲವು ಸಾಮಾನ್ಯ ನಿಯಮ, ಇದರ ಮೂಲಕ ಮಾತಾಡುವವನಿಗೂ ಕೇಳುವವನಿಗೂ ಇರುವ ಅನುಭವ ಸಾಮ್ಯದಿಂದ-ಹಿಂದೆ ಹೇಳದ, ಕೇಳದ ಮಾತುಗಳ ಅರ್ಥ ವೇದ್ಯವಾಗುತ್ತದೆ. ಇರುವ ಮೂಲಸಾಮಗ್ರಿಯನ್ನೇ ಉಪಯೋಗಿಸಿ-ಒಂದು ಹೊಸ ರೂಪವನ್ನು ಸೃಷ್ಟಿ ಮಾಡಲು ಅಥವಾ ಇರುವ ರೂಪಕ್ಕೆ ಹೊಸ ಅರ್ಥವನ್ನು ತಾತ್ಕಾಲಿಕವಾಗಿ ಹೊಂದಿಸಿ ಪ್ರಯೋಗಿಸಲು-ಒಂದು ಭಾಷೆಯನ್ನಾಡುವ ಜನ ಶಕ್ತರಾಗುತ್ತಾರೆ. ಅಂಥ ಪ್ರಯೋಗಗಳನ್ನು ನುಡಿಗಟ್ಟುಗಳೆಂದು (ಈಡಿಯಮ್ಸ್) ಗುರುತಿಸುವುದು ವಾಡಿಕೆ. ಕನ್ನಡದ ಪೂರ್ವ ಕವಿಗಳು ಇದನ್ನೇ ದೇಸೆ, ದೇಶಿ ಎಂದೆಲ್ಲ ಕರೆದಿರುವುದು.

	ತದ್ಧಿತ ರೂಪಗಳೂ ನುಡಿಗಟ್ಟುಗಳನ್ನು ರಚನಾ ಸಾಮ್ಯದಿಂದ ಹೋಲುತ್ತವಾದರೂ ಎರಡಕ್ಕೂ ವ್ಯತ್ಯಾಸ ಉಂಟು. ಮೂಲ ಸಾಮಗ್ರಿಯಿಂದ ಹೊಸತೊಂದನ್ನು ಸೃಷ್ಟಿ ಮಾಡುವ ಗುಣ ಎರಡಕ್ಕೂ ಸಾಮಾನ್ಯವಾಗಿದೆ. ಆದರೂ ತದ್ಧಿತಗಳೂ ನುಡಿಗಟ್ಟುಗಳೂ ಬೇರೆ ಬೇರೆ. ತದ್ಧಿತ ಪ್ರತ್ಯಯಗಳಿಂದ ಹಲವು ಪದಗಳನ್ನು ರಚಿಸಬಹುದು. ಅವೆಲ್ಲ ನಿಶ್ಚಯವಾಗಿ ವ್ಯಾಕರಣದ ಪೂರ್ವನಿಯಮವನ್ನನುಸರಿಸಿರುವುವು. ಬಹುರೂಪ ರಚನಾ ಸಾಮಥ್ರ್ಯ ನುಡಿಗಟ್ಟುಗಳಿಗಿಲ್ಲ. ಅವುಗಳ ಸಂದರ್ಭ ವಿಶಿಷ್ಟವಾದದು.

	ನುಡಿಗಟ್ಟುಗಳಿಗೆ ಶೀಘ್ರ ಜನನ ಮತ್ತು ಮರಣ ಎರಡೂ ಇರುವುದರಿಂದ, ಬಹುಮಟ್ಟಿಗೆ ಅವು ಅಲ್ಪಾಯುಗಳಾದರೂ ಕೆಲವು ಆಕರ್ಷಕವಾಗಿ ಇರುವುದರಿಂದ ಬಹು ಕಾಲ ಬಳಕೆಯಲ್ಲಿ ನಿಲ್ಲಬಹುದು. ಯಾವುದಾದರೂ ವಿಶಿಷ್ಟ ಸಂದರ್ಭದಲ್ಲಿ ಅದು ಉಂಟಾಗಿ ಅದೇ ಸಂಧರ್ಭ ಬರುವಲ್ಲೆಲ್ಲ ಅದೇ ಪ್ರಯೋಗವಾಗುವುದೇ ಅದು ನುಡಿಗಟ್ಟು. ಆದರೆ ಅದರ ಬದಲಿಗೆ ಇನ್ನೊಂದಕ್ಕೆ ಒಂದು ಪ್ರಯೋಗವಾದಾಗ-ಅದು ನುಡಿಗಟ್ಟಾಗಿ ಉಳಿಯುವುದಿಲ್ಲ. ಅಂಕಿತನಾಮಗಳು ಈ ಸಾಲಿಗೆ ಸೇರುತ್ತವೆ.

	ಆ ಗಂಡ ಹೆಂಡಿರು ಹಾಲು ಜೇನಿನಂತೆ-ಎಂದಾಗ ಹಾಲು ಮತ್ತು ಜೇನಿನಂತೆ ಅಪ್ಯಾಯಮಾನವಾಗಿ, ಸವಿಯಾಗಿ ಸಂಸಾರ ಮಾಡುವವರು ಎಂದೆಲ್ಲ ಅರ್ಥ. ಅವರಿಬ್ಬರಿಗೆ ಎಣ್ಣೆ ಸೀಗೆ ಎಂದಾಗ, ಪರಸ್ಪರ ವಿರೋಧಿಗಳೂ ಎಂದರ್ಥ. ಇವನ್ನು ಹಾಲು-ನೀರು, ಜೇನು-ನೀರು, ಎಣ್ಣೆ-ತುಪ್ಪ, ಸೀಗೆ-ತುಪ್ಪ ಎಂದಿತ್ಯಾದಿಯಾಗಿ ಉಪಯೋಗಿಸಲು ಬರುವುದಿಲ್ಲ. ಆದುದರಿಂದ ಇವು ತದ್ಧಿತ ರೂಪಗಳಂತೆಯೋ, ಕೆಂದುಟಿ, ಕೆಂಗಣ್ಣು ಇತ್ಯಾದಿ ಸಮಾಸಗಳಂತೆಯೋ ಅಮಿತ ಸೃಷ್ಟಿಯ ಗುಣವುಳ್ಳ ರೂಪಗಳಲ್ಲ. ಅವನು ಕಂಗಾಲಾದ, ಅಂದಾಗ ಕಣ್ಣು-ಕಾಲು ಎಂಬ ಮೂಲ ಪದಗಳ ಕೋಶಾರ್ಥ ಕಂಗಾಲು ಎಂಬ ಪದದ ವಲಯದೊಳಗೆ ಬರುವುದಿಲ್ಲ.

	ತಮ್ಮ ಜಾಣತನವನ್ನು ತೋರಿಸಿಕೊಳ್ಳುವುದಕ್ಕೋ ಹಾಸ್ಯದ ಉದ್ದೇಶಕ್ಕೋ ನುಡಿಗಟ್ಟುಗಳು ಸೃಷ್ಟಿಯಾಗುವುದಿದೆ. ಇಸು ಎಂಬ ಕ್ರಿಯಾಪ್ರತ್ಯಯವನ್ನು ಕೆಲವು ನಾಮಪದಗಳಿಗೆ ಸೇರಿಸಿ ಕ್ರಿಯಾಪದಗಳನ್ನು ರಚಿಸುವುದು ಕನ್ನಡ ವ್ಯಾಕರಣ ಪ್ರಕ್ರಿಯೆ. ಬೋಳು+ಇಸು=ಬೋಳಿಸು; ಮುದ್ದು+ಇಸು=ಮುದ್ದಿಸು, ತಲ್ಲಣ+ಇಸು=ತಲ್ಲಣಿಸು ಇತ್ಯಾದಿ. ಹೆಚ್ಚಾಗಿ ಸಂಸ್ಕøತ ನಾಮಪದದಿಂದ ಕನ್ನಡಕ್ಕೆ ಕ್ರಿಯಾಪದಗಳನ್ನು ಈ ವಿಧಾನದಿಂದ ರಚನೆ ಮಾಡಿಕೊಳ್ಳುವುದು ರೂಢಿ. ಉದಾ : ಉದ್ಘಾಟನೆ + ಇಸು=ಉದ್ಘಾಟಿಸು, ನಿದ್ರೆ+ಇಸು=ನಿದ್ರಿಸು ಇತ್ಯಾದಿ. ಈ ಕ್ರಮದಿಂದ ಪ್ರಚೋದಿತವಾಗಿ, ಹಾಸ್ಯಕ್ಕಾಗಿ, ಇಂಗ್ಲಿಷ್ ಭಾಷೆಯ ನಾಮಪದಗಳನ್ನು ಇಸು ಪ್ರತ್ಯಯ ಸೇರಿಸಿ ಪಂಪು+ಇಸು=ಪಂಪಿಸು ಪದ ಬಳಕೆಯನ್ನು ಕಾಣಬಹುದು. ಆದರೆ ಇಲ್ಲಿ ಮೇಲಿನ ಉದಾಹರಣೆಗಳಂತೆ, ವ್ಯಾಕರಣ ಪ್ರಕ್ರಿಯೆಯಾಗುವ ಸಂಭವವಿಲ್ಲ. ಕಾರಣ, ಇದನ್ನು ಬೇರೆ ನಾಮಪದಗಳಿಗೂ ಆರೋಪಿಸಿ, ಕಾರು+ಇಸು=ಕಾರಿಸು, ಬಸ್ಸು +ಇಸು=ಬಸ್ಸಿಸು ಎಂದೆಲ್ಲ ಹೇಳಲು ಸಾಧ್ಯವಿಲ್ಲ. ಹಾಗಾಗಿ ಕ್ವಚಿತ್ತಾಗಿ ಬಂದ ಪಂಪಿಸು ರೂಪ ಹಾಸ್ಯಕ್ಕಾಗಿ ಆರಂಭಿಸಿದ ಒಂದು ನುಡಿಗಟ್ಟು. ಅಂದರೆ, ಭಾಷೆಯಲ್ಲಿರುವ ಕ್ರಿಯಾ ನಿಷ್ಪತ್ತಿಯ ನಿಯಮವನ್ನು ಅದರ ಮಿತಿಗಿಂತ ಸ್ವಲ್ಪ ಉದ್ದಕ್ಕೆಳೆದಂತೆ ಆಗಿದೆ. ಹಣ್ಣು ತಿನ್ನು, ರೊಟ್ಟಿ ತಿನ್ನು ಎಂಬಿತ್ಯಾದಿ ರಚನೆಗಳನ್ನನುಸರಿಸಿ, ಪೆಟ್ಟು ತಿನ್ನು ಎಂಬುದೂ ಮೊದಲು ಚಮತ್ಕಾರಕ್ಕೋ ಹಾಸ್ಯಕ್ಕೋ ಆರಂಭವಾಗಿ ಆಕರ್ಷಕವಾಗಿದ್ದುದರಿಂದ ಸ್ಥಿರವಾಗಿ ಬಳಕೆಯಾಗುತ್ತಿದೆ, ಮಾತ್ರವಲ್ಲ ಕನ್ನಡದ ಜ್ಞಾತಿಭಾಷೆಗಳಲ್ಲೂ ಇದಕ್ಕೆ ಸಮಾನ ರೂಪಗಳನ್ನು ಕಾಣುತ್ತೇವೆ.

	ಒಂದು ಭಾಷೆಯ ನುಡಿಗಟ್ಟಿನ ರಚನೆಗೂ, ಮತ್ತೊಂದು ಭಾಷೆಯ ನುಡಿಗಟ್ಟಿಗೂ ವ್ಯತ್ಯಾಸ ಸಹಜ. ಹೀಗಾಗಿ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರ ಮಾಡುವ ಕಾರ್ಯ ಬಿರುಸಿನದಾಗುತ್ತದೆ. ಆ ಭಾಷೆಯ ದೇಸಿಯ ಅರಿವಿಲ್ಲದೆ ಪದ ಪದಗಳ ಕೋಶಾರ್ಥದ ಅನುವಾದ ಮಾಡಿದರೆ, ವಿಷಯದ ರೂಪವೇ ಕೆಟ್ಟು ಸ್ವಾರಸ್ಯವಳಿಯುವ ಸಂದರ್ಭವೇ ಹೆಚ್ಚು. ಉದಾಹರಣೆಗೆ, ಮೇಲಿನ ಪೆಟ್ಟು ತಿನ್ನು ಎಂಬುದನ್ನು ಇಂಗ್ಲಿಷಿಗೆ eಚಿಣ ಣhe bಟoತಿ ಎಂದು ಭಾಷಾಂತರಿಸಿದರೆ ನಗೆಪಾಟಲಾಗುತ್ತದೆ. ಹಾಗೆಯೇ ಇಂಗ್ಲಿಷಿನಲ್ಲಿ ಸಾಯಿ ಎಂಬರ್ಥದಲ್ಲಿನ ಞiಛಿಞ ಣhe buಛಿಞeಣ ಎಂಬುದನ್ನು ಕನ್ನಡದಲ್ಲಿ ಬಕೀಟು ಒದಿ ಎಂದು ಭಾಷಾಂತರಿಸಿದರೆ ಅದೂ ಅನರ್ಥವಾಗುತ್ತದೆ. ಕೆಂಪು ಪತಾಕೆ ತೋರು, ಕ್ಯಾಜುóಅಲ್ ಲೀವ್, ಅರ್ಧಚಂದ್ರ ಪ್ರಯೋಗ, ಸಕಾರ ಮುಂತಾದುವೆಲ್ಲ ವಿಶೇಷ ಸಂದರ್ಭಗಳ, ವಿಶೇಷಾರ್ಥದ ನುಡಿಗಟ್ಟುಗಳ ಪ್ರಯೋಗಗಳು. `ಅರ್ಧಚಂದ್ರ ನುಡಿಗಟ್ಟು ಹಳಗನ್ನಡದಲ್ಲಿ ಸಾಹಿತ್ಯ ರೂಪದಲ್ಲಿ ಬಂದಿಲ್ಲವಾದರೂ ಕೇಶಿರಾಜ ತನ್ನ ಶಬ್ದಮಣಿದರ್ಪಣದಲ್ಲಿ ಹೇಳಿರುವನೆಂಬುದರಿಂದ ಈ ನುಡಿಗಟ್ಟಿಗೆ ಏಳು ನೂರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು.

	ಮಾತಿನಲ್ಲಿ ಕೆಲವು ಉತ್ಪ್ರೇಕ್ಷಾಲಂಕಾರಗಳು ಬರುತ್ತವೆ. ಅವನ್ನು ನುಡಿಗಟ್ಟುಗಳ ಸಾಲಿಗೆ ಸೇರಿಸಬಹುದು. ಅವನೊಂದು ಕರಡಿಯನ್ನು ಮದುವೆಯಾಗಿದ್ದಾನೆ ಎಂದರೆ ಸಾಮಾನ್ಯ ಪ್ರಪಂಚಾನುಭವದಲ್ಲಿ ಸುಳ್ಳು ಮಾತಾಗುತ್ತದೆ. ಕಾರಣ, ಇದುವರೆಗೆ ಕರಡಿಯನ್ನು ಯಾರೂ ಮದುವೆಯಾದುದಿಲ್ಲ. ಕೃಷ್ಣ ಜಾಂಬವತೀ ಪರಿಣಯದ ಪುರಾಣದ ಹೇಳಿಕೆಯಿದ್ದರೂ ಅದು ವಾಸ್ತವ ಪ್ರಪಂಚಾನುಭವವಲ್ಲವಾದುದರಿಂದ ಮೇಲಿನ ಹೇಳಿಕೆಗೆ ಈ ಪುರಾಣ ಕತೆಯಲ್ಲಿ ಆಧಾರವಿಲ್ಲ. ಮಾತಿನ ಉದ್ದೇಶ ಮದುವೆಯಾದವನ ಹೆಂಡತಿ ಮಾನಿನಿಯೇ ಆದರೂ ಅವಳು ಈ ಮಾನವ ಗುಣಕ್ಕೆ ದೂರವಾಗಿದ್ದಾಳೆ. ಅದು ರೂಪ, ಆಕಾರ, ಗುಣ, ಯಾವುದಕ್ಕೊಂದಕ್ಕಾದರೂ ಅನ್ವಯಿಸಿರಬಹುದು; ಇಲ್ಲ ಅವೆಲ್ಲಕ್ಕೂ ಅನ್ವಯಿಸಿರಬಹುದು.

	ಕೆಲವೆಡೆ ಮಾತುಗಳನ್ನು ಚುಟುಕಾಗಿಸುವ ಪದ್ಧತಿಯಿದೆ. ಯುನೋ(Uಓಔ), ಯುನೆಸ್ಕೋ (UಓಇSಅಔ) ಎಂಬಿತ್ಯಾದಿಗಳು ಸಹ ನುಡಿಗಟ್ಟುಗಳ ಸಾಲಿಗೆ ಸೇರುತ್ತವೆ. ಬಿ.ಎ., ಎಂ.ಎ. ಸಹ ಇಂಥವೇ. ಅವನು ಎಮ್ಮೇ ಎಂದಾಗ ಸ್ವಲ್ಪ ಉಚ್ಚಾರಣಾ ಭೇದದಿಂದ, ಒಂದು ನುಡಿಗಟ್ಟಿನಿಂದ ಇನ್ನೊಂದು ಹುಟ್ಟಿಕೊಳ್ಳುತ್ತದೆ. ಅವನ ಪಚ್ಚಡಿಯಾಗಿ ಇನ್ನೂ ಮುಗಿಯಲಿಲ್ಲವೇ ಎಂಬಲ್ಲಿ ಪಿಎಚ್.ಡಿ., ಪಚ್ಚಡಿ ಎಂಬ ರೂಪಾಂತರ ಹೊಂದಿರುತ್ತದೆ. ಇದೆಲ್ಲ ಹಾಸ್ಯಕ್ಕಾಗಿ ಉಂಟಾದ ವಿಕೃತ ರೂಪಗಳು ಇಲ್ಲವೇ ವಿಕೃತ ಪ್ರಯೋಗಗಳು. ಮೊಟಕಾಗಿಸುವುದು ಸಮಯ ಮತ್ತು ಸ್ಥಳದ ಉಳಿತಾಯಕ್ಕೆ. Zooಟogಥಿ ಪದ ಮೊಟಕಾಗಿ Zoo ಗೆ ಎಂಟು ಮಂದಿ ಹುಡುಗಿಯರು ಈ ವರ್ಷ ಸೇರಿದ್ದಾರೆ-ಎಂದು ಕಾಲೇಜಿಗೆ ಸಂಬಂಧಿಸಿ ಬರುವ ಮಾತಿದೆ. ಸಾಮಾನ್ಯ ಪ್ರಾಪಂಚಿಕಾನುಭವದಂತೆ, Zoo ಅಂದರೆ ಮೃಗಶಾಲೆಗೆ ಹುಡುಗಿಯರು ಸೇರುವ ಸಂದರ್ಭವಿಲ್ಲ. ಕಾಲೇಜಿನ ವಾತಾವರಣವಿಲ್ಲದೆ ಇದ್ದರೆ ಈ ಮಾತೂ ಅರ್ಥವಾಗುವುದಿಲ್ಲ.

	ಕಾಫಿ ಕುಡಿಯೋಣ ಎಂಬುದನ್ನು ಹಾಸ್ಯಕ್ಕಾಗಿ ಕಳ್ಳು ಕುಡಿಯೋಣ ಎನ್ನುವುದು, ಹೋಟೆಲಿಗೆ ಗಡಂಗು (ಕಳ್ಳು ಮಾಡುವ ಅಂಗಡಿ) ಎಂದೆಲ್ಲ ನಿಜ ರೂಪವನ್ನು ಮರೆಸಿ ಹೇಳುವುದು, ಪಂಡಿತ ಎಂಬುದನ್ನು ಪನ್+ಡಿತ ಅಂದರೆ ಪನ್ (Puಟಿ) ಇಂಗ್ಲಿಷಿನಲ್ಲಿ ಇದಕ್ಕೆ ಒಂದು ಅರ್ಥಕ್ಕಿಂತ ಹೆಚ್ಚು ಅರ್ಥ ಇದ್ದು ಮಾತಾಡುವ ಸಬ್ಬವಕಾರ ಎಂದು ಅರ್ಥವಿರುವುದರಿಂದ ಒಂದು ಪದವನ್ನೊಡೆದು, ಬೇರೊಂದು ಭಾಷೆಯ ಅರ್ಥವನ್ನಾರೋಪಿಸುವುದು ಎಲ್ಲ ಒಂದು ಪರಿಮಿತಿಯೊಳಗೆ ಬರುವ ನುಡಿಗಟ್ಟುಗಳು. ಕರ್ವಿನ ತುದಿಯಂತಿರೆ ವಿರಸಮಕ್ಕುಂ, ನಿನಗೆ ಬೇನೆ ಮೂಡಿತ್ತೆ, ಪೆಂಡತಿಯಂ ಸೊಪ್ಪು ನಾರಾಗಿ ಬಡಿಯೆ, ಕಣ್ಕುರುಡಾದೊಡಮೇನೊ ಕರುಡಾಗಲೆವೇ¿್ಪುದೆ ನಿಮ್ಮ ಬುದ್ಧಿಯುಂ? ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ, ಮುಂ ಪೊಡೆವಂ ಕೂ¿ಂ, ಬರಿಯಂ ರಕ್ಕಸನನೆ, ಸೂಜಿಯ ಕಣ್ಣುಂ, ಪಾಸಗೆಯ ಕಣ್ಣುಮೇನುರುಗುಗುಮೇ, ಕೆಲದೊಳಿರ್ದ ದುಂಡುರುಂಬೆಗಳ್, ಆನೆಗೊಲೆಗೊಂದಪುದು, ತಲೆಯಂ ಮೂಗು ಮನೊತ್ತೆಯಿಟ್ಟು, ಬಡಿಗಂಡನಿಲ್ಲ ಪಾಲನೆ ಕಂಡಂ, ಮಿಟ್ಟೆಗೊಂಡ ಚಿಟ್ಟೆಯ ತೆರದಿಂ, ನೀರೊಳಂ ಕಿರ್ಚಿನೊಳಂ ಪೊರಳ್ದು, ಕಾಯ್ದ ಬೆನ್ನೀರ್ ಮನೆ ಸುಡದು, ನೂಲ ತೋಡಾಗದೆ ಕೆಟ್ಟು ಪೋದರ್, ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನ್, ತನ್ನಿಕ್ಕಿದ ತತ್ತಿಯನೆ ಪಾವು ನೊಣೆದಂತಕ್ಕುಂ, ಸೆಟ್ಟಿಯ ಬಳ್ಳಂ ಕಿರಿದು, ಇಂತಹ ನುಡಿಗಟ್ಟುಗಳನ್ನು ಹಳಗನ್ನಡ ಕಾವ್ಯಗಳಲ್ಲಿ ಕಾಣಬಹುದು.

	ಕಣ್ಣಿಗೆ ಬೀಳು, ಕಣ್ಣು ಬಂತು, ಎಕ್ಕಹುಟ್ಟಿಹೋಯಿತು, ಬಾಲಬಿಚ್ಚು, ಮೂಗು ಹಾಕು, ನಿದ್ದೆಕೊರೆ, ಹೊಟ್ಟುಕುಟ್ಟು, ಸತ್ತು ಸುಣ್ಣವಾಗು, ತೋಟದೂರ, ಮೀಸೆ ಮಣ್ಣಾಗು, ಬೇಳೆಬೇಯೊಲ್ಲ, ಕಿವಿಕಚ್ಚು, ಹರಟೆಕೊಚ್ಚು, ಬೆಟ್ಟುಮಡಿಸು, ಟೋಪಿ ಹಾಕು, ಹುಬ್ಬು ಹಾರಿಸು, ತಾರಮ್ಮಯ್ಯ ಆಡು- ಮೊದಲಾದವು ಹೊಸಗನ್ನಡದಲ್ಲಿ ಬೆಳಕಿಗೆ ಬಂದಿರುವ ನುಡಿಗಟ್ಟುಗಳು.

	ಆಧುನಿಕ ಭಾಷಾ ವಿಜ್ಞಾನದಲ್ಲಿ, ರೂಪಪರಿವರ್ತನ ಸೃಜನಾತ್ಮಕ ವ್ಯಾಕರಣ ಪದ್ಧತಿಯ ಪ್ರಕಾರ, ಭಾಷೆಗೆ ಒಳಪದರ ಮತ್ತು ಹೊರಪದರಗಳೆಂಬ ಎರಡು ಪದರುಗಳಿದ್ದು, ಒಳಪದರದ ರೂಪದ ಮೇಲೆ ಕೆಲವು ಪರಿವರ್ತನ ಕ್ರಿಯೆಗಳು ನಡೆದು, ಹೊರಪದರದ ರೂಪವುಂಟಾಗುತ್ತದೆ ಎಂದೆಲ್ಲ ಹೇಳುತ್ತಾರೆ. ಆದರೆ ಊe ಞiಛಿಞeಜ ಣhe buಛಿಞeಣ ಎಂಬುದರ ಧ್ವನಿ ಪ್ರಧಾನವಾದ ಹೊರಪದರದ ರೂಪದ ಒಳದನಿ ಏನು? ಅರ್ಥಪ್ರಧಾನವಾದ ಒಳಪದರದಲ್ಲಿ ಇದರ ರೂಪ; ಅವನು ಸತ್ತ. ಎಂಬ ವಾಕ್ಯಕ್ಕೆ ಸಂವಾದಿಯಾಗಿ ಊe ಠಿಚಿsseಜ ಚಿತಿಚಿಥಿ, ಊe ಜieಜ, ಊe bಡಿeಚಿಣheಜ his ಟಚಿsಣ- ಎಂದೆಲ್ಲ ಇರಬಹುದು. ಅದರಿಂದ ಯಾವುದರಿಂದಲೂ ಹೊರಪದರವನ್ನು ನಿಷ್ಪತ್ತಿ ಮಾಡಿ, ಪದಕೋಶದ ಮೂಲಕ ಒಳ ಹೊರಸ್ತರಗಳನ್ನು ಹೊಂದಿಸಬಹುದು. ಆದರೆ ಅವೆಲ್ಲವುಗಳಿಂದ ಊe ಞiಛಿಞeಜ his buಛಿಞeಣ ರೂಪವನ್ನು ನಿಷ್ಪತ್ತಿ ಮಾಡಲು ಸಾಧ್ಯವಿಲ್ಲ. ಪದಕೋಶದ ಮೂಲಕ ಈ ವಾಕ್ಯದ ಪದ ಪದಗಳಿಗೆ ಅರ್ಥವನ್ನು ಹೊಂದಿಸಿ, ಅದರ ಒಟ್ಟಾರೆ ಅರ್ಥವನ್ನು ತಿಳಿಯಲು ಸಾಧ್ಯವಿಲ್ಲ. ಆದುದರಿಂದ ರೂಪಪರಿವರ್ತನಾ ಸೃಜನಾತ್ಮಕ ವ್ಯಾಕರಣ ಪದ್ಧತಿ ಇಂಥ ನುಡಿಗಟ್ಟುಗಳನ್ನು ವಿವರಿಸುವುದರಲ್ಲಿ ಯಶಸ್ವಿಯಾಗುವುದಿಲ್ಲ. ರಚನಾತ್ಮಕ ಪದ್ಧತಿಯೂ ಅಷ್ಟೇ. ಹೀಗೆ ನುಡಿಗಟ್ಟುಗಳು ವ್ಯಾಕರಣ ನಿಯಮದ ಕಟ್ಟಿಗೆ ಒಳಗಾಗದೆ, ಒಂದು ಭಾಷೆಯನ್ನಾಡುವ ಜನರ ಅನುಭವ, ಅಗತ್ಯ ಹಾಗೂ ಸಂದರ್ಭಕ್ಕೆ ಸರಿಯಾಗಿ, ರೂಪುಗೊಳ್ಳುತ್ತವೆ. ಆಕರ್ಷಕವಾಗಿ, ಸಶಕ್ತವಾಗಿದ್ದಲ್ಲಿ ಬಹುಕಾಲ ನೆಲೆ ನಿಲ್ಲುತ್ತವೆ. ಇಲ್ಲದಿದ್ದರೆ ಅಳಿಸಿ ಹೋಗುತ್ತ, ಮರು ಹುಟ್ಟು-ಪಡೆಯುತ್ತವೆ. ಭಾಷೆಯ ಜೀವಾಳ, ಭಾಷೆಯ ಜಾಯಮಾನಕ್ಕೆ ತಕ್ಕಂತೆ ಎಂದೆಲ್ಲ ಅನಿರ್ದಿಷ್ಟ ಮಾತುಗಳನ್ನು ನಾವು ಅನೇಕ ಸಲ ಹೇಳುತ್ತೇವೆ. ಆದರೆ ಅದು ಯಾವುದು ಎಂದರೆ ಇಂಥದೇ ಎಂದು ತೋರಿಸಲು ಯಾರಿಂದಲೂ ಸಂಪೂರ್ಣ ಸಾಧ್ಯವಾಗದು. ಅದರ ಸೂತ್ರ ಈ ನುಡಿಗಟ್ಟುಗಳಲ್ಲಿದೆಯೆಂದು ತೋರುತ್ತದೆ. ಒಂದು ಭಾಷೆಯನ್ನು ತಿಳಿಯುವುದೆಂದರೆ ಧ್ವನಿ, ಪದರಚನೆ, ವಾಕ್ಯರಚನೆ, ಪದಗಳ ಅರ್ಥ ಇವಿಷ್ಟನ್ನೇ ಗೊತ್ತು ಮಾಡಿಕೊಳ್ಳುವುದಲ್ಲ. ಆಯಾ ಭಾಷೆಯ ನುಡಿಗಟ್ಟುಗಳ ಹಿಡಿತ ಸಿಗುವವರೆಗೆ ಒಬ್ಬ ಆ ನುಡಿಯ ಗುಟ್ಟನ್ನೂ ಕಂಡುಕೊಳ್ಳಲಿಲ್ಲವೆಂದರ್ಥ.									(ಕೆ.ಕೆ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ